Sorry, you need to enable JavaScript to visit this website.

ದಾಳಿಂಬೆ ಹಣ್ಣಿನ ಸವಿರುಚಿಯಂತೆ ಅದರ ಬೀಜವು ಉಪಯುಕ್ತ

Read time: 1 min
ಚಿತ್ರ: Unsplash ಅಲ್ಲಿ ಸಮಯ್ ಭಾವ್ಸರ್

ಅಬ್ಬಾ! ಈ ಬೇಸಿಗೆಯಲ್ಲಿ ತಣ್ಣನೆಯ ದಾಳಿಂಬೆ ರಸ ಯಾರಿಗೆ ಬೇಡ? ಕೆಲವರಿಗೆ ರಸ ಇಷ್ಟವಾದರೆ ಇನ್ನೂ ಹಲವರಿಗೆ ಹಣ್ಣೇ ರುಚಿ, ನಡುವೆ ಸಿಗುವ ಬೀಜದ್ದೇ ಕಿರಿಕಿರಿ. ಆದರೆ  ಈ ಬೀಜದಿಂದ ತೆಗೆದ ಎಣ್ಣೆಯೂ ಹಣ್ಣಿನಷ್ಟೇ ಆರೋಗ್ಯಕರ ಎಂದು ನಿಮಗೆ ಗೊತ್ತೇ? ಇತ್ತೀಚಿನ ಸಂಶೋಧನೆಯ ಪ್ರಕಾರ ಭಾರತೀಯ ತಂತ್ರಜ್ಞಾನ ಸಂಸ್ಥೆ ಬಾಂಬೆಯ (ಐಐಟಿ ಬಾಂಬೆ) ಪ್ರಾಧ್ಯಾಪಕರಾದ ಪ್ರೊ. ಅಮಿತ್ ಅರೋರಾ ಮತ್ತು ಸಂಗಡಿಗರು ದಾಳಿಂಬೆ ಬೀಜದಿಂದ ಎಣ್ಣೆಯನ್ನು ತೆಗೆಯುವ ನವೀನ ವಿಧಾನವನ್ನು ಪ್ರಸ್ಥಾಪಿಸಿದ್ದಾರೆ. ಈ ವಿಧಾನವು ಅತ್ಯoತ ಅಗ್ಗವಾಗಿಯೂ, ತ್ಯಾಜ್ಯ ರಹಿತವಾಗಿಯೂ ಇದ್ದು ಅತೀ ಹೆಚ್ಚು ಗುಣಮಟ್ಟದ ಪ್ರೋಟೀನ್ (ಸಸಾರಜನಕ ಆಹಾರ ಪದಾರ್ಥ) ಮತ್ತು ನಾರಿನ ಅಂಶ ನೀಡಬಲ್ಲದು.

ಭಾರತವು ೨೦೧೬ರಲ್ಲಿ ೨.೩ ಮಿಲಿಯನ್ ಟನ್ಗಳಷ್ಟು ದಾಳಿಂಬೆ ಉತ್ಪಾದನೆ ಮಾಡಿ, ಜಗತ್ತಿನಲ್ಲಿ ಪ್ರಥಮ ಸ್ಥಾನ ಪಡೆದಿದೆ. ಈ ಹಣ್ಣಿನ ಬೇಡಿಕೆ ಹೆಚ್ಚಾದಂತೇ ಅದರಿಂದ ಬರುವ ತ್ಯಾಜ್ಯವಾದ ಬೀಜದ ಮೊತ್ತವೂ ಹೆಚ್ಚಾಗುತ್ತಿದೆ. ದಾಳಿಂಬೆ ಬೀಜದಿಂದ ತೆಗೆದ ಎಣ್ಣೆಯು ಕ್ಯಾನ್ಸರ್ ನಿರೋಧಕ, ಉತ್ಕರ್ಷಣ ನಿರೋಧಕ (ಆಂಟೀ ಓಕ್ಸಿಡೆಂಟ್), ಮಧುಮೇಹ ನಿರೋಧಕ, ಹೀಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದರೇ, ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಪ್ರೋಟೀನ್ ಮತ್ತು ನಾರಿನ ಅಂಶಗಳನ್ನು ಹೊಂದಿದೆ.

"ದಾಳಿಂಬೆ ಬೀಜದಿಂದ ಬರುವ ಎಣ್ಣೆ ಮತ್ತು ಪ್ರೋಟೀನ್ ಅಂಶವು ಅಗಸೆ ಬೀಜ ಮತ್ತು ಚಿಯಾ ಬೀಜಗಳಷ್ಟೇ ಪೌಷ್ಟಿಕವಾಗಿದೆ. ಈ ಬೀಜಗಳ ಬದಲಿಗೆ ದಾಳಿಂಬೆ ಬೀಜವನ್ನು ಬಳಸಬಹುದು", ಎನ್ನುತ್ತಾರೆ ಪ್ರೊ. ಅರೋರಾ.

ವಿಜ್ಞಾನಿಗಳು ದಾಳಿಂಬೆ ಬೀಜದಿಂದ ಎಣ್ಣೆ ತೆಗೆಯುವ ಪ್ರಯತ್ನ ಮುಂಚೆ ಮಾಡಿದ್ದೂ, ಅದರಿಂದ ಭಾಗಶಃ ಯಶಸ್ಸು ಮಾತ್ರ ಕಂಡಿದ್ದರು. ಬಹುತೇಕ ತ್ಯಾಜ್ಯ ವ್ಯರ್ಥವಾಗುತಿತ್ತು. ಸಾಮಾನ್ಯ ವಿಧಾನವಾದ ಕೋಲ್ಡ್ ಪ್ರೆಸ್ ತಂತ್ರಜ್ಞಾನದಲ್ಲಿ ಹೈಡ್ರಾಲಿಕ್ (ಜಲಚಾಲಿತ) ಒತ್ತುವ ಯಂತ್ರವನ್ನು ಉಪಯೋಗಿಸಿ ಕೇವಲ ೪೦-೫೦ ಪ್ರತಿಶತ ಮಾತ್ರ ಎಣ್ಣೆ ತೆಗೆಯಲ್ಪಡುತ್ತದೆ ಮತ್ತು ಹೆಚ್ಚು ಶಕ್ತಿ ಬೇಕಾಗುತ್ತದೆ. ರಾಸಾಯನಿಕ ವಿಧಾನದಲ್ಲಿ ಹೆಕ್ಸೇನ್ನಂತಹ ವಿಷಪೂರಿತ ರಾಸಾಯನಿಕಗಳಿದ್ದು, ಅವು ಪರಿಸರಕ್ಕೆ ಹಾನಿಯುಂಟುಮಾಡುತ್ತವೆ. ಅದಲ್ಲದೇ ಅಂತಹ ರಾಸಾಯನಿಕಗಳನ್ನು ಹೊರಹಾಕಲು ಎಚ್ಚರ ವಹಿಸಬೇಕು. ಇದರಿಂದ ಇಂತಹ ನಿರ್ಮಾಣದ ಮತ್ತು ಕಾರ್ಯಾಚರಣೆಯ ಖರ್ಚು ಹೆಚ್ಚಾಗುತ್ತದೆ. ಎಣ್ಣೆ ತೆಗೆಯಲು ಹೆಚ್ಚಿನ ಉಷ್ಣಾಂಶ ಅಥವಾ ಒತ್ತಡ ಬಳಿಸಿದ್ದಲ್ಲಿ ಎಣ್ಣೆಯ ಮತ್ತು ಪ್ರೋಟೀನಿನ ಗುಣಮಟ್ಟ ಕ್ಷೀಣಿಸುವುದಲ್ಲದೇ, ಪೌಷ್ಟಿಕಾಂಶದ ಮತ್ತು ಆರ್ಥಿಕ ಮೌಲ್ಯ ಕಡಿಮೆಯಾಗುತ್ತದೆ. ಮೈಕ್ರೋವೇವ್ ಮತ್ತು ಅಲ್ಟ್ರಾಸೌಂಡ್ ವಿಧಾನಗಳು ೯೫-೯೯ ಪ್ರತಿಶತ ಇಳುವರಿ ಹೊಂದಿದ್ದರೂ, ಬಹಳ ದುಬಾರಿಯಾಗಿವೆ.

ಐಐಟಿ ಬಾಂಬೆಯ ಈ ಅಧ್ಯಯನದಲ್ಲಿ ಪ್ರಸ್ತಾಪಿಸಿರುವ ವಿಧಾನವು ಮೇಲ್ಕಂಡ ಎಲ್ಲಾ ಕೊರತೆಗಳನ್ನು ನಿವಾರಿಸುವುದಲ್ಲದೇ, ಪರಿಸರಸ್ನೇಹಿಯಾಗಿದ್ದು ಹೆಚ್ಚಿನ ಪೌಷ್ಠಿಕತೆಯುಳ್ಳ ಎಣ್ಣೆಯನ್ನು ನೀಡುತ್ತದೆ. ವಿಜ್ಞಾನಿಗಳ ಪ್ರಕಾರ ಈ ವಿಧಾನವು ಸರಳ ಹಾಗೂ ಕಡಿಮೆ ಪ್ರಮಾಣದ ಬೀಜಗಳಿಗೂ ಬಳಸಬಹುದು. ಇಲ್ಲಿ ದಾಳಿಂಬೆ ಬೀಜಗಳನ್ನು ಒಣಗಿಸಿ, ಪುಡಿ ಮಾಡಿ, ಸೋಡಿಯಂ ಫಾಸ್ಫೇಟ್ ಎಂಬ ರಾಸಾಯನಿಕದ ಜೊತೆಗೆ ಮಿಶ್ರಣ ಮಾಡಿ ೧೦ ನಿಮಿಷಗಳ ಕಾಲ ೪೫ ಡಿಗ್ರಿ ಸೆಲ್ಷಿಯಸ್ ನ ತಾಪಮಾನದಲ್ಲಿ ಇಡಲಾಗುತ್ತದೆ. ನಂತರ ಪ್ರೋಟಿಯೇಸ್ ಎಂಬ ಕಿಣ್ವವು (enzyme) ಬೀಜಗಳ ಹೊರಪದರವನ್ನು ಬಿಡಿಸಿ ಎಣ್ಣೆಯನ್ನು ಬಿಡುಗಡೆಗೊಳಿಸುತ್ತದೆ. ಈ ಮಿಶ್ರಣವನ್ನು ೪-೧೬ ಗಂಟೆಗಳ ತನಕ ಕುಲುಕಿ ಎಣ್ಣೆಯ ಪದರ, ಪ್ರೋಟೀನ್ ಮತ್ತು ನಾರಿನ ಅಂಶಗಳನ್ನು ಬೇರ್ಪಡಿಸಲಾಗುತ್ತದೆ.

ಸತತ ಪ್ರಯೋಗಗಳಿಂದ ವಿಜ್ಞಾನಿಗಳು ವಿವಿಧ ಕಿಣ್ವದ ಪ್ರಮಾಣಗಳನ್ನು ಉಪಯೋಗಿಸಿ ಅತ್ಯಂತ ಹೆಚ್ಚಿನ ಎಣ್ಣೆ, ಪ್ರೋಟೀನ್ ಮತ್ತು ನಾರನ್ನು ೧೪ ಗಂಟೆಗಳಲ್ಲಿ ಬೇರ್ಪಡಿಸುವ ಪ್ರಶಸ್ತ ಪ್ರಮಾಣವನ್ನು ಕಂಡುಹಿಡಿದಿದ್ದಾರೆ. ಶೇಖಡ ೯೮ ಪ್ರತಿಶತ ಎಣ್ಣೆ, ೯೩ ಪ್ರತಿಶತ ಪ್ರೋಟೀನ್ ತೆಗೆಯುವುದರಲ್ಲಿ ಯಶಸ್ವಿಯಾಗಿದ್ದು ಇವುಗಳ ಗುಣಮಟ್ಟ ಇತರ ವಿಧಾನಗಳಿಗಿಂತ ಉತ್ತಮವಾಗಿದೆ.

ಈ ಅಧ್ಯಯನವು ದಾಳಿಂಬೆ ಬೀಜಗಳ ಔಷಧಿಯ ಹಾಗು ಇತರ ಉಪಯೋಗಗಳನ್ನು ಹೊರತರುವುದಾಗಿ ಸಂಶೋಧಕರು ಹೇಳುತ್ತಾರೆ. ಈ ಅಧ್ಯಯನವು ಸಣ್ಣ ಪ್ರಮಾಣದ್ದಾಗಿದ್ದರಿಂದ, ಕೈಗಾರಿಕಾ ಶಕ್ಯತೆಯನ್ನು ಧೃಡಪಡಿಸಬೇಕಿದೆ. "ಈವರೆಗೂ ದಾಳಿಂಬೆ ಬೀಜದ ಎಣ್ಣೆಯ ದುಷ್ಪರಿಣಾಮಗಳು ಎಲ್ಲೂ ವರದಿಯಾಗಿಲ್ಲ. ಆದರೆ ಎಣ್ಣೆಯು ದಿನಗಳೆದಂತೆ ಕಮಟಾಗುವುದರಿಂದ ಇದರ ಸ್ಥಿರತೆ ಮತ್ತು ಆಹಾರ ಪದಾರ್ಥಗಳಲ್ಲಿಯ ಬಳಕೆಯ ಬಗ್ಗೆ ಹೆಚ್ಚಿನ ಶೋಧನೆಗಳು ಅಗತ್ಯ", ಎನ್ನುತ್ತಾರೆ ಪ್ರೊ. ಅರೋರಾ.