Sorry, you need to enable JavaScript to visit this website.

ಪಶ್ಚಿಮ ಘಟ್ಟಗಳಲ್ಲಿನ ಶ್ವೇತ-ಪೃಷ್ಠ ರಣಹದ್ದುಗಳ ನಿಗೂಢ ಜೀವನ - ಒಂದು ಅಧ್ಯಯನ

Read time: ೧ ನಿಮಿಷ
ಪಶ್ಚಿಮ ಘಟ್ಟಗಳಲ್ಲಿನ ಶ್ವೇತ-ಪೃಷ್ಠ ರಣಹದ್ದುಗಳ ನಿಗೂಢ  ಜೀವನ - ಒಂದು ಅಧ್ಯಯನ

ಚಿತ್ರ: ಸಿಂಧುಜಾ ಶೃಂಗೇರಿ

ಶ್ವೇತ-ಪೃಷ್ಠ ರಣಹದ್ದು (ಜಿಪ್ಸ್ ಬೆಂಗಾಲೆನ್ಸಿಸ್) ಹಿಂದೆ ವಿಶ್ವದಲ್ಲಿ ಹೇರಳವಾಗಿ ಕಂಡುಬರುತ್ತಿದ್ದ ಹಿಂಸ್ರ ಪಕ್ಷಿಗಳಲ್ಲಿ ಒಂದು. ಕಳೆದ ಮೂರು ದಶಕಗಳಲ್ಲಿ, ಡೈಕ್ಲೋಫೆನಾಕ್ ವಿಷದ  ಪರಿಣಾಮವಾಗಿ ಅವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಡೈಕ್ಲೋಫೆನಾಕ್ ಎಂಬುದು, ಸಾಯುತ್ತಿರುವ ಜಾನುವಾರುಗಳಲ್ಲಿ ನೋವು ಉಪಶಮನ ಮಾಡಲು ಉಪಯೋಗಿಸುವ ಒಂದು ಪಶುವೈದ್ಯಕೀಯ ಔಷದ. ಡೈಕ್ಲೋಫೆನಾಕ್ ಚುಚ್ಚುಮದ್ದು ಕೊಡಲಾದಪ್ರಾಣಿಗಳ ಕಳೇಬರವನ್ನು ರಣಹದ್ದುಗಳು ತಿಂದಾಗ ಅವುಗಳ ಅಂಗಾಂಗಗಳಲ್ಲಿ ಸಂಧಿವಾತ ರೋಗ ಉಂಟಾಗಿ ಸಾಯುತ್ತವೆ.  ಪಶುವೈದ್ಯಕೀಯ ಉದ್ದೇಶಗಳಿಗಾಗಿ  ಡೈಕ್ಲೋಫೆನಾಕ್ ಉಪಯೋಗದ ನಿಷೇಧ, ಬಂಧಿತ ಪ್ರಜನನ ಕೇಂದ್ರಗಳ ಸ್ಥಾಪನೆ, ಹಾಗೂ ರಣಹದ್ದು ಸುರಕ್ಷಣಾ ವಲಯಗಳನ್ನು ಗುರುತಿಸುವುದೇ ಮುಂತಾದ ಕ್ರಮಗಳ ಪರಿಣಾಮವಾಗಿ, ಈ ಭವ್ಯ ಪರಿಸರ ಝಾಡಮಾಲಿಗಳ ಭವಿಷ್ಯ ಉಜ್ವಲವಾಗಿದೆ.

ಇತ್ತೀಚಿನ ಅಧ್ಯಯನವೊಂದರಲ್ಲಿ, ಮುಂಬೈನ ‘ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ’ ಯ ಜೀವವಿಜ್ಞಾನಿಗಳು, ತಮಿಳುನಾಡಿನ ಸಿಗೂರು ಪ್ರಸ್ಥಭೂಮಿಯ ಶ್ವೇತ-ಪೃಷ್ಠ ರಣಹದ್ದುಗಳ ವೀಕ್ಷಣೆ ನಡೆಸಿ, ಅದು  ರಣಹದ್ದು ಪಕ್ಷಿಧಾಮವನ್ನು ಸ್ಥಾಪಿಸಲು ಪ್ರಶಸ್ತವಾದ ಪ್ರದೇಶವೆಂದು ತೀರ್ಮಾನಿಸಿದರು. ಜರ್ನಲ್ ಆಫ್  ತ್ರೆಟನ್ಡ್  ಟ್ಯಾಕ್ಸ (ಅಪಾಯದ ಅಂಚಿನಲ್ಲಿರುವ ಪ್ರಾಣಿಗಳ ಬಗೆಗಿನ ದಾಖಲೆ ಪುಸ್ತಕ) ದಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ ಆ ಪ್ರದೇಶದ ರಣಹದ್ದುಗಳ ಬಗ್ಗೆ ಜನರ ತಿಳುವಳಿಕೆಯನ್ನೂ ವಿಶ್ಲೇಷಿಸಲಾಗಿದೆ.  ಇದು ಪ್ರಾಣಿ ಸಂರಕ್ಷಣೆಗೆ ಬಹಳ  ಮಹತ್ವದ ಮಾನದಂಡ. 

ಸಿಗೂರು ಪ್ರಸ್ತಭೂಮಿ, ಪೂರ್ವ ಮತ್ತು ಪಶ್ಚಿಮ ಘಟ್ಟಗಳನ್ನು ಸೇರಿಸುತ್ತವೆ ಹಾಗೂ ಮೂರು ಹುಲಿ ಮೀಸಲು ಪ್ರದೇಶಗಳಾದ ಬಂಡೀಪುರ, ಮುದುಮಲೈ ಮತ್ತು ಸತ್ಯಮಂಗಲಂ ಹುಲಿ ಮೀಸಲು ಪ್ರದೇಶಗಳು ಕೂಡುವಲ್ಲಿ ಇದೆ. ಈ ಪ್ರದೇಶ 778.80 ಚದರ ಕಿಮೀ. ವಿಸ್ತೀರ್ಣವಿದ್ದು, ಹೆಚ್ಚು ಕಡಿಮೆ ಬೆಂಗಳೂರು ನಗರದಷ್ಟು ದೊಡ್ಡದಾಗಿದೆ. ಅದರಲ್ಲಿ ಶ್ವೇತ-ಪೃಷ್ಠ  ರಣಹದ್ದುಗಳ ಒಂದು ಚಿಕ್ಕ ಸಮುದಾಯವಿದ್ದು, ಅವು ವನ್ಯಜೀವಿಗಳ ಕಳೇಬರಗಳನ್ನು ತಿನ್ನುತ್ತವೆ; ಹಾಗಾಗಿ ಡೈಕ್ಲೋಫೆನಾಕ್ ವಿಷಕ್ಕೆ ತುತ್ತಾಗಿಲ್ಲ. ಸೆಪ್ಟೆಂಬರ್ 2011 ಹಾಗೂ ಮೇ 2012ರ ನಡುವಿನ ಈ ಅಧ್ಯಯನದಲ್ಲಿ ಸಂಶೋಧಕರು, ಶ್ವೇತ-ಪೃಷ್ಠ ರಣಹದ್ದುಗಳ ಸಂಖ್ಯೆ, ಪ್ರಜನನ, ಆಹಾರ ಪದ್ಧತಿ, ಮುಂತಾದುವುಗಳ ಬಗ್ಗೆ ಹೆಚ್ಚು ಹೆಚ್ಚು ವಿವರಗಳನ್ನು ತಿಳಿದರು.

ಈ ಅಧ್ಯಯನದ ಮುಖ್ಯ ಲೇಖಕರಾದ ಆರೋಕ್ಯನಾಥನ್ ಸ್ಯಾಮ್ಸನ್ ಅವರು, “ನಾವು 2011 ರಿಂದ ರಣಹದ್ದುಗಳ ಸಂಖ್ಯೆಯನ್ನು ನಿಯಂತ್ರಿಸುತ್ತಿದ್ದೇವೆ ಮತ್ತು ಮುದುಮಲೈ ಹುಲಿ ಮೀಸಲು ಪ್ರದೇಶದಲ್ಲಿ ಆ ಕಾರ್ಯಕ್ರಮವನ್ನು ಮುಂದುವರೆಸುತ್ತಿದ್ದೇವೆ.  ಇಂದು, ಮೂರು ಜಾತಿಯ  ಸ್ಥಳೀಯ ರಣಹದ್ದುಗಳ - ಶ್ವೇತ-ಪೃಷ್ಠ ರಣಹದ್ದು, ಉದ್ದ ಕೊಕ್ಕಿನ ರಣಹದ್ದು ಹಾಗೂ ಕೆಂಪು-ತಲೆ ರಣಹದ್ದುಗಳ - ಸಂಖ್ಯೆ 220ಕ್ಕೂ ಹೆಚ್ಚಾಗಿದ್ದು, ಅವುಗಳ ಎಣಿಕೆ ಇನ್ನೂ ಮುಂದುವರೆದಿದೆ.” ಎಂದು ಹೇಳುತ್ತಾರೆ. ಅವರು ಮುಂಬೈನ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ‘ರಣಹದ್ದು ಕಾರ್ಯಕ್ರಮ’ದ ಸಂಶೋಧನ ಜೀವಶಾಸ್ತ್ರಜ್ಞರು.

ಮುಂಜಾನೆ ಬೇಗ  ಮತ್ತು ಸಂಜೆ ತಡವಾಗಿ, ಗೂಡುಮಾಡುವ ಮತ್ತು  ಆಹಾರ ತಿನ್ನುವ ಸ್ಥಳಗಳಲ್ಲಿ ಕಂಡುಬಂದ ರಣಹದ್ದುಗಳನ್ನು ಸಂಶೋಧಕರು ಎಣಿಸಿದರು. ಅವರ ಅಂದಾಜಿನ ಪ್ರಕಾರ ಈ ಜಾಗದಲ್ಲಿ ಸುಮಾರು 70 ರಿಂದ 115 ರಣಹದ್ದುಗಳು, ಎರಡು ಹಿಂಡುಗಳಲ್ಲಿ ವಾಸಮಾಡುತ್ತವೆ. ಅವರು ಸಿಗೂರು ಮತ್ತು ಗುಂಡತ್ತಿಹಳ್ಳ ನದಿಗಳ ದಂಡೆಯ ಉದ್ದಕ್ಕೂ 41 ಮರಗಳ ಮೇಲೆ 68 ರಣಹದ್ದಿನ ಗೂಡುಗಳನ್ನು ಕಂಡರು. ಬಹಳಷ್ಟು ಗೂಡುಗಳು ಹೊಳೆಮತ್ತಿ ಮರಗಳ ಮೇಲೆ ಸರಾಸರಿ 28 ಮೀಟರ್ ಎತ್ತರದಲ್ಲಿ ಕಂಡು ಬಂದುವು.

“ಮುದುಮಲೈ ಹುಲಿಮೀಸಲು ಪ್ರದೇಶದಲ್ಲಿ, ಈ ರಣಹದ್ದುಗಳು ಗೂಡುಮಾಡಲು ಮುಂದೆಯೂ ಅನುಕೂಲವಾಗುವಂತೆ ನದಿಯ ದಂಡೆಯ ಉದ್ದಕ್ಕೂ ಹೊಳೆಮತ್ತಿ  ಮರಗಳನ್ನು ನೆಡಲಾಗುತ್ತಿದೆ.” ಎಂದು ಸ್ಯಾಮ್ಸನ್ ಹೇಳುತ್ತಾರೆ. ಈ ಗೂಡುಗಳಲ್ಲಿ ಕಂಡುಬಂದ ಹತ್ತು ಮೊಟ್ಟೆಗಳ ಪೈಕಿ ಒಂಬತ್ತು ಯಶಸ್ವಿಯಾಗಿ ಮರಿಗಳಾದವು.

ಆ ಪ್ರದೇಶದಲ್ಲಿ ಕಂಡುಬರುವ ವನ್ಯಜೀವಿಗಳ ಕಳೇಬರಗಳಲ್ಲಿ ಸುಮಾರು ಅರ್ಧದಷ್ಟನ್ನು ಈ ರಣಹದ್ದುಗಳು ತಿನ್ನುತ್ತವೆ ಎಂಬ ಅಂಶವೂ ಈ ಅಧ್ಯಯನದಲ್ಲಿ ಕಂಡುಬಂತು. ಸತ್ತ ಪ್ರಾಣಿಗಳನ್ನು ತಿಂದು, ಪೋಷಕಾಂಶಗಳು ಮರುಬಳಕೆ ಆಗುವ ಪ್ರಕ್ರಿಯೆಯಲ್ಲಿ ಸ್ವಚ್ಛತಾ ಕರ್ಮಚಾರಿಗಳಾದ ಇವುಗಳ ಪಾತ್ರ ಮಹತ್ವದ್ದು. ಇನ್ನೊಂದು ಕುತೂಹಲಕಾರಿ ಅಂಶವೆಂದರೆ ರಣಹದ್ದುಗಳು, ಆ ಪ್ರದೇಶದಲ್ಲಿ ಕಂಡುಬರುವ ಆನೆಗಳು ಮತ್ತು ಕಾಡೆಮ್ಮೆಗಳ ಕಳೇಬರಗಳನ್ನು ಇಷ್ಟ ಪಡುತ್ತವೆ.

ಜನಗಳಲ್ಲಿ ಈ ಪಕ್ಷಿಗಳ ಬಗೆಗಿನ ಅರಿವು, ಅವುಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ, ಸಂಶೋಧಕರು, ಜನಗಳ ದೃಷ್ಟಿಕೋನವನ್ನು ತಿಳಿಯಲು ಜಾನುವಾರುಗಳನ್ನು ಉಳ್ಳವರು ಮತ್ತು ಪಶುವೈದ್ಯರು ಸೇರಿದಂತೆ, ಸುತ್ತಮುತ್ತಲಿನ ಹಳ್ಳಿಗಳಲ್ಲಿನ 109 ಜನರನ್ನು ಸಂದರ್ಶಿಸಿದರು.  ಈ ಪೈಕಿ 10ರಲ್ಲಿ 9 ಮಂದಿ ರಣಹದ್ದುಗಳನ್ನು ಸಂರಕ್ಷಿಸುವುದು ಪರಿಸರ ವ್ಯವಸ್ಥೆಗೆ ಉಪಕಾರಿ ಎಂದು ನಂಬಿದ್ದಾರೆ. ಈ ಹಳ್ಳಿಗರು ಜಾನುವಾರುಗಳ ಕಳೇಬರವನ್ನು ಹಳ್ಳಿಯಿಂದ 300 ರಿಂದ 500 ಮೀಟರ್ ದೂರದಲ್ಲಿ ಕಾಡಿನಲ್ಲಿ ವಿಲೇವಾರಿ ಮಾಡುತ್ತಿದ್ದರು ಹಾಗೂ ಪಶುಗಳಿಗೆ ಚಿಕಿತ್ಸೆ ಮಾಡಲು ಹದ್ದುಗಳಿಗೆ ವಿಷಕಾರಿಯಲ್ಲದ ಮೇಲೊಕ್ಸಿಕ್ಯಾಮ್ ಎನ್ನುವ ಔಷಧವನ್ನು ಉಪಯೋಗಿಸುತ್ತಿದ್ದರು. ಹತ್ತಿರದ ಔಷಧಿ ಅಂಗಡಿಗಳಲ್ಲಿ ನಾಲ್ಕರಲ್ಲಿ ಮಾತ್ರ ಡೈಕ್ಲೋಫೆನಾಕ್ ಮಾರಾಟ ಮಾಡುತ್ತಿದ್ದರೂ, ಅದು ಮನುಷ್ಯನಬಳಕೆಗಾಗಿ ಮಾತ್ರ.

ಈ ಸಂಶೋಧನೆಗಳ ಆಧಾರದ ಮೇಲೆ, ಸಿಗೂರು ಪ್ರಸ್ಥಭೂಮಿಯು ರಣಹದ್ದು ಅಭಯಧಾಮ ಮಾಡಲು ಅತ್ಯಂತ ಪ್ರಶಸ್ತವಾದ ಸ್ಥಳವೆಂದು  ಸಂಶೋಧಕರು ಸೂಚಿಸುತ್ತಾರೆ. ಇನ್ನೊಂದು ಮುಖ್ಯ ಕಾರಣವೆಂದರೆ ಮೂರು ಹುಲಿ ಮೀಸಲು ಪ್ರದೇಶಗಳು ಕೂಡುವ ಪ್ರದೇಶದಲ್ಲಿರುವ ಈ ಪ್ರಸ್ಥಭೂಮಿಯಲ್ಲಿ ರಣಹದ್ದುಗಳಿಗೆ ಯಥೇಚ್ಛವಾಗಿ ಆಹಾರವೂ ಸಿಗುತ್ತದೆ. 


ಈ ಲೇಖನದ ನಿಖರತೆಯನ್ನು, ಲೇಖನದಲ್ಲಿ ಹೆಸರಿಸಲಾದ ಸಂಶೋಧಕರಿಗೆ  ತೋರಿಸಿ ಖಚಿತಪಡಿಸಿಕೊಳ್ಳಲಾಗಿದೆ.