ಉಷ್ಣವಲಯದ ಸವನ್ನಾಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಅಲ್ಲಿ ತಂಪೆನಿಸುವ ಎತ್ತರದ ಮರಗಳಿಲ್ಲದೇ ಇರಬಹುದು, ಆದರೆ ಎಲ್ಲಿನೋಡಿದರೂ ಹಸಿರು ಹುಲ್ಲು, ವಿವಿಧ ಚಿಟ್ಟೆಗಳೂ, ಕೀಟಗಳೂ, ಅವುಗಳನ್ನು ಹಿಡಿಯಲು ಅಡಗಿ ಕುಳಿತ ಹಕ್ಕಿಗಳೂ, ಹಾವು-ಹಲ್ಲಿ-ಓತಿಕೇತಗಳೂ ಕಾಣಸಿಗುತ್ತವೆ. ವಿಸ್ತಾರವಾದ ಹುಲ್ಲುಗಾವಲುಗಳಿಂದ ತುಂಬಿರುವ ಸವನ್ನಾಗಳನ್ನು, ಸಾಮಾನ್ಯವಾಗಿ ಪಾಳುಭೂಮಿಗಳು ಎಂದು ತಪ್ಪಾಗಿ ವರ್ಗೀಕರಿಸಲಾಗುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಈ ಉಷ್ಣವಲಯದ ಹುಲ್ಲುಗಾವಲೆಂಬ ಪರಿಸರ ವ್ಯವಸ್ಥೆಗಳು, ಹಲವು ಬಗೆಯಲ್ಲಿ ಅನನ್ಯವೆನಿಸಿದ್ದು, ಭೂಮಿಯ ಮೇಲೆ ಮತ್ತೆಲ್ಲಿಯೂ ಕಂಡುಬರದ ಹಲವಾರು ಸಸ್ಯಗಳಿಗೆ ನೆಲೆಯಾಗಿದೆ.